ಕೇಶವದೇವ್, ಪಿ

1905-. ಇಂದು ಕೇರಳದಲ್ಲಿ ಜೀವಿಸಿರುವ ಸಾಹಿತಿಗಳಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಲ್ಲಿ ಒಬ್ಬರು. ತ್ರಿವೇಂದ್ರಂನಲ್ಲಿ ವಾಸಿಸುತ್ತಿದ್ದಾರೆ. 1928ರಲ್ಲಿ ಕ್ರಾಂತಿಕಾರಿ ಕಮ್ಯೂನಿಷ್ಟರಾಗಿದ್ದರು. `ನಾನು ಕ್ರಾಂತಿಕಾರಿಯಾಗಿರುವಾಗಲೇ ಬರೆಯಲಾರಂಭಿಸಿದೆ. ಆದರೆ ನಾನು ಬರೆಯುತ್ತಿರುವುದು ಸಾಹಿತ್ಯವೆಂದು ಓದುಗರು ಹೇಳಿದಾಗ ನನಗೆ ಅದರ ಅರಿವಾಯಿತು. ಮೊದಮೊದಲು ನಮ್ಮ ಪ್ರದೇಶದಲ್ಲಿ ಕಂಡುಬಂದ ಮಾನವ ಸಂಕಷ್ಟಗಳ ಚಿತ್ರಗಳನ್ನು ವಿಪುಲವಾಗಿ ಬರೆದೆ. ಅನಂತರ ಕೆಲವು ನಾಟಕಗಳನ್ನು ಬರೆದಿರುವೆ. ಈಗ ಕಾದಂಬರಿಗಳನ್ನು ಹೆಚ್ಚಾಗಿ ಬರೆಯುತ್ತಿರುವೆ. ಹೀಗಿದೆ ನನ್ನ ಬರಹ ಹರಿದು ಬಂದ ರೀತಿ ಎಂಬುದಾಗಿ ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ. ಅಯಲ್ಕಾರ್(ನೆರೆಹೊರೆ) ಎಂಬ ಇವರ ಕಾದಂಬರಿಗೆ 1964ರಲ್ಲಿ ಕೇಂದ್ರ ಸರ್ಕಾರದ ಸಾಹಿತ್ಯ ಅಕಾಡಮಿ ಬಹುಮಾನ ದೊರೆತಿದೆ. ಸಮಕಾಲೀನ ಕೇರಳ ಸಮಾಜದ, ಅದರಲ್ಲೂ ವಿಶೇಷವಾಗಿ ನಾಯರ್, ಈವಿವ ಮತ್ತು ಕ್ರೈಸ್ತ ಸಮಾಜಗಳ, ಜೀವನದ ಕಳೆದ ಐವತ್ತು ವರ್ಷಗಳ ಘಟನೆಗಳ ಹಿನ್ನೆಲೆಯಲ್ಲಿ ಚಿತ್ರಿತವಾಗಿದೆ ಈ ಅಯಲ್ಕಾರ್ ಕಾದಂಬರಿ.

ಸುಪ್ರಸಿದ್ಧ ಸಮಾಜ ಸುಧಾರಕರಾದ ನಾರಾಯಣಗುರು ಮತ್ತು ಅವರ ಶಿಷ್ಯರಲ್ಲೊಬ್ಬರಾದ ಅಯ್ಯಪ್ಪನ್ ಅವರ ಪ್ರಭಾವ ಕೇಶವದೇವ್ ಅವರ ಮೇಲೆ ಅಪಾರವಾಗಿದೆ. ತಾವು ಒಬ್ಬ ಮಾನವತಾವಾದಿಯೆಂದೂ ಯಾವ ಇಸಂ ಇಲ್ಲವೇ ಮತಾಂಧತೆಯಲ್ಲೂ ತಮಗೀಗ ವಿಶ್ವಾಸವಿಲ್ಲವೆಂದೂ ಇವರು ಸಾರಿದ್ದಾರೆ.

ಕೇಶವದೇವ್ ಹೆಚ್ಚು ಓದಿದವರಲ್ಲ. ಹುಟ್ಟಿದ್ದು ವಡಕ್ಕನ್ ಪರವೂರ್ ಎಂಬ ಚಿಕ್ಕ ಊರಿನಲ್ಲಿ, ಕೇವಲ ಎಂಟನೆಯ ಇಯತ್ತೆಯವರೆಗೆ ಮಾತ್ರ ಓದಿದ್ದಾರೆ. ಆದರೆ ಸ್ವಂತ ಅಭ್ಯಾಸದಿಂದ ವಿಜ್ಞಾನ, ರಾಜಕಾರಣ, ತತ್ತ್ವಜ್ಞಾನಗಳನ್ನು ಚೆನ್ನಾಗಿ ಮನನ ಮಾಡಿಕೊಂಡಿದ್ದಾರೆ. ಇಲ್ಲಿಯ ತನಕ ಹನ್ನೆರಡು ಕಾದಂಬರಿಗಳನ್ನೂ (ಓಡಯಿಲ್ ನಿನ್ನು ಎಂಬ ಇವರ ಕಾದಂಬರಿ ಚರಂಡಿಯಿಂದ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡು ಪ್ರಕಟಗೊಂಡಿದೆ) ಹದಿನಾರು ಕಥಾಸಂಗ್ರಹಗಳನ್ನೂ ಹನ್ನೊಂದು ನಾಟಕಗಳನ್ನೂ ಎದಿರ್ಪು(ಮೂರು ಭಾಗಗಳು) ಎಂಬ ಆತ್ಮಚರಿತ್ರೆಯನ್ನೂ ಏಳು ಏಕಾಂಕ ನಾಟಕಗಳನ್ನೂ ಒಂದು ವಿಮರ್ಶೆಯ ಗ್ರಂಥವನ್ನೂ ಪ್ರಕಟಿಸಿದ್ದಾರೆ.

ಕೇಶವದೇವ್ ಕೇರಳ ಸಾಹಿತ್ಯ ಅಕಾಡಮಿ, ಸಾಹಿತ್ಯ ಪರಿಷತ್ತುಗಳ ಸದಸ್ಯರು; ಪ್ರಗತಿಶೀಲ ಸಾಹಿತ್ಯ ಸಂಘದವರು ಕೇರಳದಲ್ಲಿ ಕೋಲಾಹಲವನ್ನೆಬ್ಬಿಸುತ್ತಿದ್ದ ಕಾಲದಲ್ಲಿವರು ಅವರ ನಾಯಕರಾಗಿದ್ದರು.                  
    (ಕೆ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ